ಅದೃಷ್ಟವಾದ
	
ಅತೀಂದ್ರಿಯ ವಸ್ತುವಾದ ಅದೃಷ್ಟವೇ ವಿಚಿತ್ರವಾದ ಈ ಜಗತ್ತಿಗೆ ಕಾರಣವೆಂದು ಪ್ರತಿಪಾದಿಸುವ ವಾದ. ವೈಶೇಷಿಕರು ಇದನ್ನು ಅದೃಷ್ಟಶಬ್ದದಿಂದಲೂ ನೈಯಾಯಿಕರು ಧರ್ಮಾಧರ್ಮ ಶಬ್ದದಿಂದಲೂ ಮೀಮಾಂಸಕರು ಅಪೂರ್ವಶಬ್ದದಿಂದಲೂ ಪೌರಾಣಿಕರು ಪುಣ್ಯಾಪುಣ್ಯಶಬ್ದದಿಂದಲೂ ವೇದಾಂತಿಗಳು ಈಶ್ವರಾನುಗ್ರಹನಿಗ್ರಹ ಶಬ್ದದಿಂದಲೂ ಬೌದ್ಧರು ವಾಸನಾಶಬ್ದದಿಂದಲೂ ಜೈನರು ಪುಣ್ಯಾಪುಣ್ಯಪುದ್ಗಲಶಬ್ದದಿಂದಲೂ ಕರೆಯುತ್ತಾರೆ. ಇದು ಇಂದ್ರಿಯ ಗೋಚರವಾಗದ ಕಾರಣ ಇದಕ್ಕೆ ಅದೃಷ್ಟ ಎಂಬ ಹೆಸರು ಇದೆ. ಇದನ್ನು ಆತ್ಮಗತವಾದ ವಸ್ತುವೆಂದು ನೈಯಾಯಿಕರೂ ಸ್ವತಂತ್ರವಸ್ತುವೆಂದು ಮೀಮಾಂಸಕರೂ ಹೇಳುತ್ತಾರೆ. ಇದರಂತೆ ಧರ್ಮ ಸದ್ಗತಿಗೆ ಸಾಧನ; ಅಧರ್ಮ ಅಧೋಗತಿಗೆ ಸಾಧನ. 
	
ಈಶ್ವರನ ಅಸ್ತಿತ್ವವನ್ನು ಒಪ್ಪಿ ಅವನೇ ಜಗತ್ತಿನ ಎಲ್ಲ ಆಗುಹೋಗುಗಳಿಗೂ ಕಾರಣವೆಂದು ಹೇಳುವವರೂ ಜೀವಾತ್ಮರ ಈ ಅದೃಷ್ಟಕ್ಕೆ ತಕ್ಕಂತೆಯೇ ಈಶ್ವರನು ಎಲ್ಲವನ್ನೂ ಮಾಡುತ್ತಾನೆ, ಇಲ್ಲದಿದ್ದರೆ ಅವನಿಗೆ ಪಕ್ಷಪಾತಾದಿಗಳು ಬರುತ್ತವೆ ಎಂದು ಹೇಳುತ್ತಾರೆ. ವಿಷಯದೃಷ್ಟಿಯಿಂದ ಈಶ್ವರಕಾರಣತ್ವವಾದವೂ ಅದೃಷ್ಟವಾದದ ಒಂದು ಭಾಗವೇ ಆಗುತ್ತದೆ.		
(ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ